ಬಾಗಲಕೋಟೆ: ದಸರಾ ಹಬ್ಬದ ಅಂಗವಾಗಿ ಬಾಗಲಕೋಟೆ ಎಸ್‌ಎಸ್‌ಕೆ (ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ) ಸಮಾಜದ ಆರಾಧ್ಯ ದೇವತೆ ಶ್ರೀ ಜಗದಂಬಾ ದೇವಿಗೆ ಅಷ್ಟಮಿ ದಿನದಂದು 'ಛಪ್ಪನ್ ಭೋಗ' ವಿಶೇಷ ಪೂಜೆ ನೆರವೇರಿಸಲಾಯಿತು.56 ಬಗೆಯ ವಿವಿಧ ಆಹಾರ ಪದಾರ್ಥಗಳು, ಸಿಹಿ ತಿಂಡಿಗಳು, ಹಣ್ಣು-ಹಂಪಲು ಹಾಗೂ ಡ್ರೈಫ್ರೂಟ್ಸ್ ಸೇರಿದಂತೆ ವಿವಿಧ ನೈವೇದ್ಯಗಳನ್ನು ದೇವಿಯ ಮುಂದೆ ಸಮರ್ಪಿಸಿ ಭಕ್ತರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ನೂರಾರು ವರ್ಷಗಳ ಇತಿಹಾಸ ಹಾಗೂ ಅಪಾರ ಭಕ್ತರ ನಂಬಿಕೆಯನ್ನು ಹೊಂದಿರುವ ಜಗದಂಬಾ ದೇವಿಯ ಸನ್ನಿಧಿಯಲ್ಲಿ ದಸರಾ ಸಂದರ್ಭದಲ್ಲಿ ನಡೆಯುವ ಈ ಛಪ್ಪನ್ ಭೋಗ ಪೂಜೆ ವಿಶೇಷ ಮಹತ್ವ ಪಡೆದಿದೆ. ಜಾತಿ-ಮತ-ಪಂಥದ ಭೇದವಿಲ್ಲದೆ ವಿವಿಧ ಸಮುದಾಯಗಳ ಭಕ್ತರು ಭಕ್ತಿಯಿಂದ ಪಾಲ್ಗೊಂಡು ನೈವೇದ್ಯ ಅರ್ಪಿಸುವುದು ಇಲ್ಲಿನ ವಿಶೇಷತೆ.ದಸರಾ ಅಂಗವಾಗಿ ಹತ್ತು ದಿನಗಳ ಕಾಲ ಬೆಳಗಿನ ಜಾವ ಮಹಾ ಕಾಕಡಾ ಆರತಿ ಹಾಗೂ ಸಂಜೆ ಮಹಾ ಮಂಗಳಾರತಿ ನಡೆಯುತ್ತಿದ್ದು, ಪ್ರತಿದಿನ ದೇವಿಗೆ ವಿಭಿನ್ನ ಅಲಂಕಾರ ಮಾಡಲಾಗುತ್ತಿದೆ. ದೇವಿಯ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳು ಭಕ್ತರ ಗಮನ ಸೆಳೆಯುತ್ತಿವೆ. ಛಪ್ಪನ್ ಭೋಗ ಪೂಜೆಯ ಬಳಿಕ ವಿವಿಧ ಪ್ರದೇಶಗಳಿಂದ ಆಗಮಿಸಿದ ಭಕ್ತರು ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಜಗದಂಬಾ ದೇವಿಯ ಕೃಪೆಯಿಂದ ಸಕಲ ಸಂಕಷ್ಟಗಳು ದೂರವಾಗಿ, ಎಲ್ಲರ ಮನೆ-ಮನಗಳಲ್ಲಿ ಸುಖ, ಶಾಂತಿ ಹಾಗೂ ಸಮೃದ್ಧಿ ನೆಲೆಸಲಿ ಎಂದು ಭಕ್ತರು ಪ್ರಾರ್ಥಿಸಿದರು.ಇದನ್ನೂ ಓದಿ: ಮೈಸೂರು ಅರಮನೆಯಲ್ಲಿ ಕಳೆಗಟ್ಟಿದ ಆಯುಧ ಪೂಜೆ ಸಂಭ್ರಮ: ಖಾಸಾ ಆಯುಧ, ಪಟ್ಟದ ಆನೆ ಕುದುರೆಗಳಿಗೂ ವಿಶೇಷ ಪೂಜೆ