ಹುಬ್ಬಳ್ಳಿ: ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟದ ಕಾವು ಹುಬ್ಬಳ್ಳಿಯಲ್ಲೂ ತೀವ್ರಗೊಂಡಿದೆ. ನಗರದ ಇಂಡಿಪಂಪ್ ಬಳಿ ಕಬ್ಬು ಬೆಳೆಗಾರರು ರಸ್ತೆಗಿಳಿದು ಬೃಹತ್ ಪ್ರತಿಭಟನೆ ನಡೆಸಿದರು. ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದ ರೈತರು, ಕಬ್ಬಿನ ದರ ಹೆಚ್ಚಳಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಹುಬ್ಬಳ್ಳಿ - ಕಾರವಾರ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ತಮ್ಮ ಅಸಮಾಧಾನ ಹೊರಹಾಕಿದರು. ರೈತರು ರಸ್ತೆಯಲ್ಲೇ ಮಾನವ ಸರಪಳಿ ನಿರ್ಮಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು.ಪ್ರತಿಭಟನೆಯ ವೇಳೆ ಇಂಡಿಪಂಪ್ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುವ ಮೂಲಕ ಹೋರಾಟಕ್ಕೆ ಬೆಂಬಲ ಸೂಚಿಸುವಂತೆ ರೈತರು ಆಗ್ರಹಿಸಿದರು. ಇದರಿಂದ ಸ್ಥಳೀಯ ವ್ಯಾಪಾರ ವಹಿವಾಟಿನ ಮೇಲೂ ಪ್ರತಿಭಟನೆಯ ಪರಿಣಾಮ ಬೀರಿತು.ಕಬ್ಬು ಬೆಳೆಯಲು ರೈತರು ಸಾಕಷ್ಟು ಹಣ, ಶ್ರಮ ಹಾಗೂ ಸಮಯ ವ್ಯಯಿಸುತ್ತಿದ್ದಾರೆ. ಆದರೆ, ಬೆಳೆಗೆ ತಕ್ಕ ಬೆಲೆ ಸಿಗದಿದ್ದರೆ ಕೃಷಿ ನಡೆಸುವುದು ಕಷ್ಟವಾಗುತ್ತದೆ ಎಂಬುದು ರೈತರ ಪ್ರಮುಖ ಅಳಲಾಗಿದೆ. ಉತ್ಪಾದನಾ ವೆಚ್ಚ, ಕಾರ್ಮಿಕರ ಕೂಲಿ, ಗೊಬ್ಬರ, ಔಷಧ ಹಾಗೂ ಸಾಗಣೆ ವೆಚ್ಚಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಬ್ಬಿನ ದರವನ್ನು ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದ ರೈತರು, ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಯುತ ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು. ರೈತರ ಹೋರಾಟಕ್ಕೆ ಸರ್ಕಾರ ಸೂಕ್ತ ಸ್ಪಂದನೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನೂ ಪ್ರತಿಭಟನಾಕಾರರು ನೀಡಿದ್ದಾರೆ.ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಹಿನ್ನೆಲೆ ವಾಹನ ಸವಾರರಿಗೆ ಸಂಚಾರ ಅಡಚಣೆ ಉಂಟಾಯಿತು. ಪ್ರತಿಭಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸಂಚಾರ ವ್ಯವಸ್ಥೆ ಹಾಗೂ ಸಾರ್ವಜನಿಕರ ದೈನಂದಿನ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿತು.ಇದನ್ನೂ ಓದಿ: ಕಬ್ಬು ಬೆಳೆಗಾರರಿಂದ 'ಕರ್ನಾಟಕ ಬಂದ್': ವಿವಿಧೆಡೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ